Tuesday, October 5, 2010

Prajavani Post on Foricos on strike

ಕೇಳುತ್ತಿದೆಯೇ... ‘ಅರಣ್ಯ’ ರೋದನ?
ನೆತ್ರಕೆರೆ ಉದಯಶಂಕರ
ಬೆಳ್ಳಿ ಹಬ್ಬದ ಸಡಗರದಲ್ಲಿ ಇರಬೇಕಾಗಿದ್ದ ರಾಜ್ಯದ ಅರಣ್ಯ ಕಾಲೇಜುಗಳೆರಡೂ ಭಣಗುಡುತ್ತಿವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕೆ ಮಾನ್ಯತೆ ಕೊಡಿ ಎಂದು ಚಳವಳಿಗೆ ಇಳಿದಿದ್ದಾರೆ. ಅರಣ್ಯ ಸಂರಕ್ಷಣೆಯ ಮಹತ್ವದ ಕೆಲಸ ಆಗಬೇಕಾಗಿರುವ ಹೊತ್ತಿನಲ್ಲಿ ಈ ಕುರಿತೇ ವಿಶೇಷ ಶಿಕ್ಷಣ ಪಡೆಯಲು ಮುಂದಾಗಿರುವ ಮಕ್ಕಳ ಭವಿಷ್ಯ ಮಸುಕಾಗಿಸುವುದು ಸರಿಯೇ?



ಸರಿಯಾಗಿ 25 ವರ್ಷಗಳ ಹಿಂದೆ 1985ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದೇಶದ ಮೇರೆಗೆ ಈ ಕಾಲೇಜುಗಳು ಆರಂಭವಾದವು. ಅತ್ಯಂತ ವಿಶಿಷ್ಟ ವಿಷಯವನ್ನು ಕಲಿಸುತ್ತಿರುವ ಈ ಕಾಲೇಜುಗಳಿಗೆ ಈಗ ಬೆಳ್ಳಿ ಹಬ್ಬದ ವರ್ಷ. ಆದರೆ ದುರದೃಷ್ಟ. ಈ ಎರಡೂ ಕಾಲೇಜುಗಳು ಬೆಳ್ಳಿಹಬ್ಬದ ಸಂಭ್ರಮದ ಕಲರವಕ್ಕೆ ಬದಲಾಗಿ ಬಣಗುಡುತ್ತಿವೆ. ವಿದ್ಯಾರ್ಥಿಗಳು ಬೀದಿಗಳಲ್ಲಿ ಕುಳಿತಿದ್ದಾರೆ. ಪ್ರಾಧ್ಯಾಪಕರ ಕೈಗಳು ಕಟ್ಟಿವೆ.

ಇದು ಕರ್ನಾಟಕದಲ್ಲಿ ಇರುವ ಎರಡು ಅರಣ್ಯ ಕಾಲೇಜುಗಳ ಕಥೆ. ಒಂದು ಅರಣ್ಯ ಕಾಲೇಜು ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಶಿರಸಿ ಅರಣ್ಯ ಕಾಲೇಜು, ಇನ್ನೊಂದು ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯಕ್ಕೆ ಸೇರಿದ ಪೊನ್ನಂಪೇಟೆ ಅರಣ್ಯ ಕಾಲೇಜು.

ಅರಣ್ಯ ಶಾಸ್ತ್ರ ಪದವಿ ನೀಡಲೆಂದೇ ಆರಂಭವಾದ ಈ ಕಾಲೇಜುಗಳಿಂದ ಈಗಾಗಲೇ 1200 ಪದವೀಧರರು,110 ಸ್ನಾತಕೋತ್ತರ ಪದವೀಧರರು ಹೊರ ಬಂದಿದ್ದಾರೆ. ಪ್ರತಿವರ್ಷ ಕನಿಷ್ಠ 50 ಪದವೀಧರರು, 15 ಸ್ನಾತಕೋತ್ತರ ಪದವೀಧರರು ಈ ಗುಂಪಿಗೆ ಸೇರುತ್ತಿದ್ದಾರೆ. ಸರಕಾರವು ಈ ಪದವೀಧರರಿಗಾಗಿ ತಲಾ 4 ಲಕ್ಷ ರೂಪಾಯಿಗಳಂತೆ ವರ್ಷಕ್ಕೆ 4.4 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ.

ಇಷ್ಟೊಂದು ವೆಚ್ಚ ಮಾಡಿ ಈ ಮಕ್ಕಳಿಗೆ ಕಲಿಸಲಾಗುತ್ತಿರುವ ವಿಷಯವಾದರೂ ಏನು? ಅರಣ್ಯಗಳ ಸಂರಕ್ಷಣೆ ಹಾಗೂ ಸಂವರ್ಧನೆಯ ಶಿಕ್ಷಣ. ಕಾಡುಗಳನ್ನು ಬೆಳೆಸುವ, ಉತ್ತಮ ದರ್ಜೆಯ ಮರ ಗಿಡಗಳನ್ನು ಬೆಳೆಸಿ ಉಳಿಸುವ, ವನ್ಯ ಜೀವಿಗಳನ್ನು ಸಂರಕ್ಷಿಸುವ ವಿದ್ಯೆ. ಬೆಂಕಿ, ಕ್ರಿಮಿ ಕೀಟಗಳು, ಒತ್ತುವರಿ, ಅನಿಯಂತ್ರಿತವಾಗಿ ಮರಗಳನ್ನು ಕಡಿಯುವುದೇ ಮುಂತಾದುವುಗಳನ್ನು ತಡೆದು ಅರಣ್ಯ ಸಂಪನ್ಮೂಲಗಳನ್ನು ಉಳಿಸುವ ಕೌಶಲ ಗಳಿಕೆಯ ಶಿಕ್ಷಣ. ನಾಡಿನ ಜನತೆಗೆ ಬೇಕಾದ ಉರುವಲು ಸರಬರಾಜು ಜೊತೆಗೆ ಮರಗಳ ನಾಶವಾಗದಂತೆ ಸಮತೋಸಲನ ಕಾಯ್ದುಕೊಳ್ಳುವ ಬಗೆ ಹೇಗೆಂಬ ಶಿಕ್ಷಣ.

ಅರಣ್ಯ ಶಿಕ್ಷಣದ ಪ್ರಾಮುಖ್ಯ
ಅರಣ್ಯ ಶಿಕ್ಷಣ ಅತ್ಯಂತ ಪ್ರಮುಖ ಶಿಕ್ಷಣವಷ್ಟೇ ಅಲ್ಲ, ಅಷ್ಟೇ ಕುತೂಹಲಕಾರಿ ಕೂಡಾ. ಅರಣ್ಯಗಳು ರಾಷ್ಟ್ರದ ಸಂಪನ್ಮೂಲಕ್ಕೆ ಕೊಡುತ್ತಿರುವ ಕೊಡುಗೆ ಅಗಾಧ. ಮಾನವನ ಬದುಕಿಗೆ ಅನಾದಿ ಕಾಲದಿಂದಲೇ ಅರಣ್ಯಗಳು ನೀಡುತ್ತಿರುವ ಕೊಡುಗೆ ಅಪಾರ. ಮನುಷ್ಯರ ಜೀವನಕ್ಕೆ ಕಾಡುಗಳ ಅಸ್ತಿತ್ವ ಅತ್ಯಗತ್ಯ. ಔಷಧೀಯ ಹಾಗೂ ಸೌಂದರ್ಯ ವರ್ಧಕ ಗುಣಗಳುಳ್ಳ ಅಸಂಖ್ಯ ಗಿಡಮೂಲಿಕೆಗಳ ಆಗರ ಈ ಕಾಡುಗಳು. ಕಾಲಕಾಲಕ್ಕೆ ಬೇಕಾದ ಮಳೆ, ತಾಪಮಾನ - ಪರಿಸರ ಸಮತೋಲನ ಕಾಯ್ದು ಕೊಳ್ಳುವಿಕೆ ಅರಣ್ಯಗಳು ನೀಡುವ ವರ. ಅರಣ್ಯ ಇಲ್ಲದೇ ಇದ್ದರೆ ಬದುಕಿಗೆ ಆಧಾರಸ್ತಂಭವಾದ ಕೃಷಿ ಹಾಗೂ ಅದರ ಉಪ ಉದ್ಯಮಗಳೂ ಅತಂತ್ರ. ಅರಣ್ಯಗಳು ಕಾಡುಪ್ರಾಣಿಗಳ ನೆಲೆವೀಡಾದ್ದರಿಂದ ಅರಣ್ಯ ಶಾಸ್ತ್ರ ಮತ್ತು ವನ್ಯಜೀವಿ ಶಾಸ್ತ್ರಗಳು ಪರಸ್ಪರ ಕೈ ಹಿಡಿದುಕೊಂಡೇ ಸಾಗುತ್ತವೆ. ರಾಷ್ಟ್ರದ ಆರ್ಥಿಕ ಸಮೃದ್ಧಿಗೂ ಅರಣ್ಯ ಸಂಪತ್ತು ನೀಡುವ ಕೊಡುಗೆ ಅಪಾರ. ಹೀಗಾಗಿಯೇ ಅರಣ್ಯಗಳು, ಅರಣ್ಯ ಸಂಪನ್ಮೂಲಗಳು, ಅರಣ್ಯ ಸಂಪತ್ತಿನ ಸಂರಕ್ಷಣೆ ಮತ್ತು ಸಂವರ್ಧನೆಗಾಗಿ ವಿಶೇಷ ತರಬೇತಿ ಪಡೆದ ಸಿಬ್ಬಂದಿಯ ಅಗತ್ಯದ ಅರಿವು ಮೂಡಿತು.

ಅರಣ್ಯ ತಜ್ಞರು, ಅರಣ್ಯ ನಿರ್ವಹಣಾ ತಜ್ಞರು, ಅರಣ್ಯ ಅಧಿಕಾರಿಗಳ ಅಗತ್ಯ ಉಂಟಾದದ್ದು ಇದೇ ಕಾರಣಕ್ಕೆ. ಈ ಹಿನ್ನೆಲೆಯಲ್ಲೇ ಡೆಹ್ರಾಡೂನಿನಲ್ಲಿರುವ ಭಾರತ ಸರ್ಕಾರದ ಮಾನ್ಯತೆ ಪಡೆದ ಸ್ವಾಯತ್ತ ಸಂಸ್ಥೆ ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರೀಸರ್ಚ್ ಅಂಡ್ ಎಜುಕೇಷನ್ ರಾಷ್ಟ್ರದಾದ್ಯಂತ ಅರಣ್ಯ ಶಿಕ್ಷಣ ಹಾಗೂ ತರಬೇತಿ ನೀಡುವ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಲು ಸಲಹೆ ಮಾಡಿತು. ಈ ಸಲಹೆ ಪ್ರಕಾರವೇ ರಾಜ್ಯದಲ್ಲಿ ಆರಂಭವಾದದ್ದು ಶಿರಸಿ ಮತ್ತು ಪೊನ್ನಂಪೇಟೆಯ ಅರಣ್ಯ ಕಾಲೇಜುಗಳು.

ಮರ ಸಂರಕ್ಷಣೆ, ವನ್ಯ ಜೀವಿಗಳ ಸಂರಕ್ಷಣೆ, ವಲಯ ಭೂಮಿ ಹಾಗೂ ಬಳಕೆಯಾಗದ ಭೂಮಿಯ ನಿರ್ವಹಣೆ, ಗುಣಮಟ್ಟದ ಮರಗಳ ನರ್ಸರಿ- ಕೃಷಿ ಇತ್ಯಾದಿ ತಾಂತ್ರಿಕ ವಿದ್ಯೆಗಳೆಲ್ಲ 4 ವರ್ಷಕಾಲ ಅಧ್ಯಯನ ಮಾಡುವ ಈ ವಿದ್ಯಾರ್ಥಿಗಳು ಪಡೆಯುವ ವಿಶೇಷ ವಿದ್ಯೆಗಳು. ಇತರ ಬಿಎಸ್‌ಸಿ ಪದವೀಧರರಿಗೆ ಈ ಶಿಕ್ಷಣ ಇರುವುದಿಲ್ಲ. ಈ ವಿಶೇಷ ವಿದ್ಯೆಗಳಿಗೆ ಸಂಬಂಧಿಸಿದಂತೆ ಈ ಮಕ್ಕಳಿಗೆ ಎರಡು ವರ್ಷಗಳ ಶಿಕ್ಷಣದ ಬಳಿಕ ತರಬೇತಿ ನೀಡುವುದರ ಜೊತೆಗೆ ಕೊನೆಯ ವರ್ಷದ ಆರು ತಿಂಗಳು ಅರಣ್ಯ ಇಲಾಖೆಗಳ ಕಾರ್ಯ ವೈಖರಿಯ ಪ್ರಾಯೋಗಿಕ ತರಬೇತಿಯನ್ನೂ ನೀಡಲಾಗುತ್ತದೆ. ಎಂಜಿನಿಯರಿಂಗ್, ವೈದ್ಯಕೀಯ ವಿಭಾಗಗಳಲ್ಲಿ ಕಲಿತವರು ಆ ವಿಭಾಗಳಲ್ಲಿ ಹೇಗೆ ತಜ್ಞರೋ ಹಾಗೆ ಅರಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಈ ವಿದ್ಯಾರ್ಥಿಗಳು ತಜ್ಞರು.

ಈ ಹಿನ್ನೆಲೆಯಲ್ಲೇ ಭಾರತದ ರಾಷ್ಟ್ರೀಯ ಅರಣ್ಯ ನೀತಿ (1988) ಮತ್ತು ಕಾಮನವೆಲ್ತ್ ಒಕ್ಕೂಟ ರಾಷ್ಟ್ರಗಳ ವರದಿ (1988) ಅರಣ್ಯ ಇಲಾಖೆಗಳ ನೇಮಕಾತಿ ಸಂದರ್ಭದಲ್ಲಿ ತಾಂತ್ರಿಕ ಹುದ್ದೆಗಳಿಗೆ ಕೃಷಿ ವಿಶ್ವವಿದ್ಯಾಲಯಗಳ ಅರಣ್ಯ ಕಾಲೇಜುಗಳಲ್ಲಿ ಅಧಿಕೃತ ಶಿಕ್ಷಣ ಪಡೆದ ಅರಣ್ಯ ಶಾಸ್ತ್ರ ಪದವೀಧರರನ್ನೇ ಪರಿಗಣಿಸಬೇಕೆಂದು ಸೂಚಿಸಿವೆ.

ವೈಜ್ಞಾನಿಕವಾಗಿ ಕಾಡುಗಳ ಸಂರಕ್ಷಣೆಗೆ ಅರಣ್ಯ ಶಿಕ್ಷಣ ಮತ್ತು ಈ ಶಿಕ್ಷಣ ಪಡೆದ ಪದವೀಧರರ ಬಳಕೆ ಅತ್ಯಂತ ಮಹತ್ವದ್ದು ಎಂದು 1992ರ ರಿಯೋ ಭೂ ಶೃಂಗಸಭೆ ಕೂಡಾ ಪುನರುಚ್ಚರಿಸಿತ್ತು. ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಹಿಮಾಚಲ ಪ್ರದೇಶ, ಬಿಹಾರ, ಓಡಿಶಾ (ಒರಿಸ್ಸಾ) ಮತ್ತು ಕೇರಳ ರಾಜ್ಯಗಳು ಈ ವಿಚಾರಗಳನ್ನು ಒಪ್ಪಿ ನೂರಕ್ಕೆ ನೂರರಷ್ಟು ಪಾಲಿಸುತ್ತಿವೆ. ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಹಿಮಾಚಲ ಪ್ರದೇಶ, ಓಡಿಶಾ (ಒರಿಸ್ಸಾ) ಮತ್ತು ಕೇರಳ ರಾಜ್ಯಗಳಲ್ಲಿ ವಲಯ ಅರಣ್ಯಾಧಿಕಾರಿ (ಆರ್.ಎಫ್.ಓ) ಹುದ್ದೆಗಳಿಗೆ ಅರಣ್ಯ ಶಾಸ್ತ್ರ ಪದವಿಯನ್ನು (ಬಿ ಎಸ್ ಸಿ - ಫಾರೆಸ್ಟ್ರಿ) ಕನಿಷ್ಠ ಅರ್ಹತೆಯನ್ನಾಗಿ ಮಾಡಿವೆ.

ಬಿಹಾರದಲ್ಲಿ ಲಾಗಿಂಗ್ ಅಧಿಕಾರಿ ಹುದ್ದೆಗೆ ಅರಣ್ಯ ಶಾಸ್ತ್ರ ಪದವಿ ಕನಿಷ್ಠ ಅರ್ಹತೆ. ಆದರೆ ಕರ್ನಾಟಕ ಮಾತ್ರ ಈ ವಿಚಾರದಲ್ಲಿ ಹಿಂದುಳಿದಿದೆ. ಹಾಗಂತ ಇದೇ ಮಾದರಿಯ ಇತರ ಕ್ಷೇತ್ರಗಳ ಸ್ಥಿತಿ ಹೀಗೇನೂ ಇಲ್ಲ. ಕೃಷಿ ವಿಶ್ವವಿದ್ಯಾಲಯಗಳ ಇತರ ವೃತ್ತಿಪರ ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಮಾರ್ಕೆಟಿಂಗ್, ರೇಷ್ಮೆ ಕೃಷಿ ಪದವೀಧರರಿಗೆ ಅವರವರ ಮಾತೃ (ಮೂಲ) ಇಲಾಖೆಯಲ್ಲಿ ಇರುವ ತಾಂತ್ರಿಕ ಹುದ್ದೆಗಳಿಗೆ ತತ್ಸಮ ಪದವಿಯನ್ನೇ ಕನಿಷ್ಠ ವಿದ್ಯಾರ್ಹತೆಯಾಗಿಸಿ ಈ ಹಿಂದೆಯೇ ಆದೇಶ ಹೊರಡಿಸಲಾಗಿದೆ.

ಅರಣ್ಯ ಇಲಾಖೆಯಲ್ಲಿ ಮಾತ್ರ ತಾಂತ್ರಿಕ ಹುದ್ದೆಗಳಿಗೆ ಎಲ್ಲ ವಿಜ್ಞಾನದ ಪದವೀಧರರಿಗೂ ಮುಕ್ತ ಅರ್ಹತೆ ! ಅರಣ್ಯಗಳಿಗೆ ಸಂಬಂಧಿಸಿದಂತೆ ವಿಶೇಷ ಶಿಕ್ಷಣ ಪಡೆದಿದ್ದರೂ ಉದ್ಯೋಗ ಕೊಡುವಾಗ ಅರಣ್ಯ ಪದವೀಧರರ ಕಡೆಗಣನೆ, ಆದ್ಯತೆ ಇಲ್ಲ. ಈ ಮಲತಾಯಿ ಧೋರಣೆ ವಿರುದ್ಧ 2001ರಲ್ಲಿ ಅರಣ್ಯ ಪದವೀಧರರು ಹೋರಾಟ ನಡೆಸಿದ್ದರು. ಅದಕ್ಕೆ ಸ್ಪಂದಿಸಿದ ಅಂದಿನ ಸರಕಾರ ಅರಣ್ಯ ಇಲಾಖೆಯಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಅರಣ್ಯ ಪದವೀಧರರಿಗೆ ಶೇಕಡಾ 50ರಷ್ಟು ಮೀಸಲಾತಿಯನ್ನು ಅರಣ್ಯ ಅಧಿಕಾರಿಗಳ ಹುದ್ದೆಗೆ ಮಾತ್ರ ಕಲ್ಪಿಸಿತು. ಆದರೆ ಉಳಿದ ಶೇಕಡಾ 50ರಷ್ಟು ಹುದ್ದೆಗಳಿಗೆ ನೇರ ನೇಮಕಾತಿಯ ಬದಲು ಇಲಾಖೆಯಿಂದಲೇ ಬಡ್ತಿ ಮೂಲಕ ಭರಿಸಲು ನಿರ್ಧರಿಸಿತು. ಇದರಿಂದಾಗಿ ತರಬೇತಿ ಹೊಂದಿದ ಅನೇಕ ಅರ್ಹ ಪದವೀಧರರು ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶದಿಂದ ವಂಚಿತರಾದರು.

2006ರಲ್ಲಿ ಈ ವಿಷಯವನ್ನು ಮುಂದಿಟ್ಟುಕೊಂಡು ಅರಣ್ಯ ಕಾಲೇಜು ವಿದ್ಯಾರ್ಥಿಗಳು ಸರ್ಕಾರದ ಗಮನ ಸೆಳೆದಿದ್ದರು. ಬೆಂಗಳೂರಿನ ಅರಣ್ಯ ಭವನದಲ್ಲಿ ಎಲ್ಲ ಅಧಿಕಾರಿಗಳನ್ನು ಒಳಗೊಂಡಂತೆ ಸಭೆ ನಡೆದು ಸಮಸ್ಯೆ ನಿವಾರಣೆಯ ಭರವಸೆ ನೀಡಲಾಗಿತ್ತು. ಈ ಭರವಸೆಯನ್ನು ನಂಬಿ ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಿಗೆ ವಾಪಸಾಗಿದ್ದರು. ಆದರೆ ನಂತರ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಈ ಬಗ್ಗೆ ಕೈಗೊಳ್ಳಲಾದ ನಿರ್ಣಯದ ಬಗ್ಗೆ ವಿಚಾರಿಸಿದಾಗ ವಿದ್ಯಾರ್ಥಿಗಳಿಗೆ ಗೊತ್ತಾದದ್ದು ಈ ಸಭೆಯ ಕಲಾಪಗಳು ಅಧಿಕೃತವಾಗಿ ದಾಖಲಾಗಿಯೇ ಇಲ್ಲ ಎಂಬ ಅಮೋಘ ಸತ್ಯ!2008ರ ಆಗಸ್ಟ್ ತಿಂಗಳಲ್ಲಿ ಶಿರಸಿ ಮತ್ತು ಪೊನ್ನಂಪೇಟೆ ಅರಣ್ಯ ಕಾಲೇಜು ವಿದ್ಯಾರ್ಥಿಗಳು ಮತ್ತೆ ಧರಣಿ ಕುಳಿತಿದ್ದರು.

ವಿದ್ಯಾರ್ಥಿಗಳ ಮನವಿಗೆ ಓಗೊಟ್ಟ ಸರ್ಕಾರ 2008ರ ಸೆಪ್ಟೆಂಬರ್ 18ರಂದು ಮುಖ್ಯಮಂತ್ರಿಗಳ ಮುಖ್ಯಮಂತ್ರಿಗಳ ಆದೇಶದಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಹಾಗೂ ಕಾನೂನು ಮತ್ತು ನಗರಾಭಿವೃದ್ದಿ ಸಚಿವ ಸುರೇಶಕುಮಾರ ಅವರ ಸಮ್ಮುಖದಲ್ಲಿ ಸಭೆ ಕರೆದಿತ್ತು.

ಈ ಸಭೆಯು ಅರಣ್ಯ ಇಲಾಖೆಯ ಹುದ್ದೆಗಳಲ್ಲಿ ಶೇ. 80ರಷ್ಟು ಮೀಸಲಾತಿಯನ್ನು ಅರಣ್ಯ ಪಧವೀಧರರಿಗೆ ನೀಡಬೇಕೆಂಬ ನಿರ್ಣಯವನ್ನು ಕೈಗೊಂಡಿತು. ಅದಾಗಿ ಎರಡು ವರ್ಷ ಗತಿಸಿದೆ. ವಿದ್ಯಾರ್ಥಿಗಳ ಬೇಡಿಕೆ ಈಡೇರಿಲ್ಲ.

‘ನಾವು ಕೇಳುವುದು ಇಷ್ಟೇ ಸ್ವಾಮಿ. ಅರಣ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಬದಲಾವಣೆ ತಂದು ಪ್ರಸ್ತುತವಿರುವ ವಲಯ ಅರಣ್ಯಾಧಿಕಾರಿ (ಆರ್.ಎಫ್.ಓ) ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎ ಸಿ ಎಫ್) ಹುದ್ದೆಗಳ ನೇರ ನೇಮಕಾತಿಗೆ ಬಿ.ಎಸ್ಸಿ ಅರಣ್ಯ ಶಾಸ್ತ್ರವನ್ನೇ ಕನಿಷ್ಠ ವಿದ್ಯಾರ್ಹತೆಯನ್ನಾಗಿ ಮಾಡಿ’ ಎಂದು ಹೇಳುತ್ತಾರೆ ಶಿರಸಿ ಹಾಗೂ ಪೊನ್ನಂಪೇಟೆ ಅರಣ್ಯ ಕಾಲೇಜುಗಳ ವಿದ್ಯಾರ್ಥಿಗಳ ಸಂಘಟನೆ ‘ಕರ್ನಾಟಕ ಫಾರೆಸ್ಟ್ ಗ್ರಾಜುಯೇಟ್ಸ್ ಅಂಡ್ ಸ್ಟೂಡೆಂಟ್ಸ್ ಅಸೋಸಿಯೇಷನ್’ ಅಧ್ಯಕ್ಷ ಶಿವಾನಂದ ಇಂಚಲ್ ಮತ್ತು ಪದಾಧಿಕಾರಿ ಹರ್ಷ.

ಈ ಬೇಡಿಕೆ ಮುಂದಿಟ್ಟುಕೊಂಡು ಉಭಯ ಕಾಲೇಜುಗಳ ವಿದ್ಯಾರ್ಥಿಗಳು ಸೆಪ್ಟೆಂಬರ್ 27ರಿಂದ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟ ಮುಷ್ಕರ ಆರಂಭಿಸಿದ್ದಾರೆ. ರಾಜಧಾನಿಯಿಂದ ದೂರದಲ್ಲಿ ಪುಟ್ಟ ಊರುಗಳಲ್ಲಿ ಇರುವ ಈ ವಿದ್ಯಾರ್ಥಿಗಳ ಕೂಗು ಸರ್ಕಾರದ ಕಿವಿಗೆ ತಲುಪುವುದೇ? ಅಥವಾ ಕೇವಲ ‘ಅರಣ್ಯ ರೋದನ’ ಆಗುವುದೇ? ಪುಟ್ಟ ಊರುಗಳಲ್ಲಿ ಅರಣ್ಯ ಸಂರಕ್ಷಣೆಯಂಥ ಮಹಾನ್ ಶಿಕ್ಷಣ ನೀಡುವ ಕಾರ್ಯ ಆಗುತ್ತಿದೆ ಎಂಬುದನ್ನು ಗಮನಿಸಿ ವಿದ್ಯಾರ್ಥಿಗಳ ನ್ಯಾಯಬದ್ಧ ಬೇಡಿಕೆಗೆ ಸರ್ಕಾರ ಸ್ಪಂದಿಸುವುದೇ? ಸ್ಪಂದಿಸದಿದ್ದರೆ ಸರ್ಕಾರ ಈ ಶಿಕ್ಷಣಕ್ಕಾಗಿ ಮಾಡುತ್ತಿರುವ ವೆಚ್ಚ ನೀರ ಮೇಲಣ ಹೋಮ ಅಲ್ಲವೇ?

No comments: